ಮಾರ್ಚ್ 11, 2011

ಕಣ್ಣೆದುರೇ ಇದ್ದರೂ....

ಕಣ್ಣೆದುರೇ ಇದ್ದರೂ....


ಸಾಮಾನ್ಯವಾಗಿ ಎಲ್ಲರೂ ಹೀಗೆ....
ಒಂದಲ್ಲ ಒಂದು ಸಮಯದಲ್ಲಿ ಈ ಮಾತನ್ನ ಹೇಳೇ ಹೇಳ್ತಿವಿ....
"ಕಣ್ಣೆದುರಿಗೆ ಇದ್ರೂ ಕಾಣಲ್ಲ... ಇನ್ನು ಬೇರೆ ಎಲ್ಲಾದರೂ ಇದ್ರೆ ಹೇಗ್ ಹುಡುಕುತ್ತಾರೆ ಇವ್ರು ಅಂತ..."
ಇದು ನಮ್ಮ ಅನುಭವಕ್ಕೂ ಬಂದಿರತ್ತೆ...ಎಷ್ಟೋಸಲಾ...

ಅರ್ಥ ಆಗ್ಲಿಲ್ಲ.......!!!? 

ಈ  ಚಿಕ್ಕಪುಟ್ಟ ಮರೆವಿಗೆ.... ಕೆಲ ಉದಾಹರಣೆ ಹೇಳಲಾ...

ಕಿಸೆಯಲ್ಲೇ ಪೆನ್ನು ಇರತ್ತೆ... ಆದ್ರೆ ಆ ಪೆನ್ನು ಕಾಣ್ತಾ ಇಲ್ಲ ಅಂತ ಅಪ್ಪ ಮಕ್ಕಳ ಮೇಲೆ ಸಿಕ್ಕಾಪಟ್ಟೆ ರೇಗೋದು...
ಬೇಕಾಗಿರೋ ಪುಸ್ತಕ ಎದ್ರಿಗೆ ಇದ್ರೂ ಕಾಣ್ತಾ ಇಲ್ಲ ಅಂತ ಮಕ್ಕಳು ಕೂಗೋದು... 
ಡ್ರೆಸ್ ಹಾಕ್ಕೊಂಡಾದ ಮೇಲೆ ಕೆಲವು ಹುಡ್ಗಿಯರಿಗೆ ಅದ್ರ ದುಪಟ್ಟ ಅದ್ರ ಜೊತೆಗೇನೆ ಇದ್ರೂ ಕೈಗೆ ಸಿಗಲ್ಲ....
ಆಫೀಸಿಗೆ ಹೊರಟ ಗಂಡನಿಗೆ ಅಲ್ಲೇ ಎದುರಿಗೆ ಇರೋ ಖರ್ಚಿಫ್ ಸಿಗೋದು ಕಷ್ಟ....
ಇದೆಲ್ಲಾ ಚಿಕ್ಕಪುಟ್ಟ ಅನ್ಸಿದ್ರು ಆಮೇಲೆ ಯಾವಾಗಾದ್ರೂ ನೆನೆಸಿಕೊಂಡರೆ ನಗು ಬರೋತ್ತೆ... 
ಅದೇನ್ ಮಹಾ ವಿಷಯ... ಅಂತೀರಾ...?
ಅದೆಲ್ಲ ಚಿಕ್ಕಚಿಕ್ಕ ಮರೆವು.... ಅಂತೀರಾ...?
ಇಂಥ ಚಿಕ್ಕ ಪುಟ್ಟ ಮರೆವೆ ಒಂದೊಂದ್ಸಲ ಎಂತಾ ಮುಜುಗರ ಉಂಟುಮಾಡುತ್ತೆ  ಗೊತ್ತ? 

ಸರಿ....
ನಾನು ನಂದೇ ಒಂದು ಉದಾಹರಣೆ ಹೇಳ್ತೀನಿ
ನಾನು ಪಿ.ಯು.ಸಿ ಓದ್ತಾ ಇದ್ದ ಸಮಯ...
ಅಕ್ಟೋಬರ್ ರಜೆಲಿ ನಾನು,ನನ್ನ ಅಕ್ಕಂದಿರಿಬ್ರು (ಸೀಮಾ, ಸುಪ್ರಿಯ), ನನ್ನ ಅತ್ತೆಯ ಮಕ್ಕಳು ಇಬ್ರು (ರಾಧಿಕಾ,ಶ್ರೀಧರ), ನನ್ನ ಸಣ್ಣತ್ತೆಯ ತಮ್ಮ (ಸಂತೋಷ) ಅವ್ನ ಊರವರಿಬ್ರು ಸೇರಿ ಸಾಗರದತ್ರ ಇರೋ ಜಗತ್ಪ್ರಸಿದ್ಧ ಜೋಗ ಜಲಪಾತಕ್ಕೆ ಹೋಗಿದ್ವಿ...
ಬೆಳಗ್ಗೆ ಬೇಗ ಹೊರಟಿದ್ವಿ... ಬೇಗ ಹೋಗಿ ಬೇಗ ಬರಬಹುದು ಅಂತ... ಅಂತು ಎರಡು ಬಸ್ ಹತ್ತಿ ಇಳದು ಮಾಡಿ ಹೋಗೋವರೆಗೆ ೯.೩೦ ಆಗಿತ್ತು...
ಸರಿ.... ಹೇಗಿದ್ರು ಬೆಳಗ್ಗೆನೇ  ತಿಂಡಿ ತಿನ್ಕೋ ಬಂದಿದ್ವಲ್ಲ ... ಮಧ್ಯಾನ ಊಟದ ಸಮಯದೊಳಗೆ ಕೆಳಗಡೆ ಇಳಿದು ಮೇಲೆ ಹತ್ತಿ ಬರಬೋದು ಅಂತ ಪ್ಲಾನ್ ಹಾಕ್ಕೊಂಡು ಒಂದೆರಡು ಕೋಲ್ಡ್ ಡ್ರಿಂಕ್ಸ್ ಬಾಟಲ್ಗಳನ್ನೂ, ತಿನ್ನೋಕೆ ಸ್ವಲ್ಪ ತಿಂಡಿ ಎಲ್ಲ ತಗೊಂಡು ಇಳಿಯೋಕೆ ಶುರು ಮಾಡಿದ್ವಿ... 

ಅವಾಗಿನ್ನು ಈಗಿನ ತರಹ ಮೆಟ್ಟಿಲುಗಳನ್ನ ಮಾಡಿರಲಿಲ್ಲ ಇಳಿಯೋಕೆ...
ಹಳೆ ಕಾಲದಲ್ಲಿ ಮಾಡಿದ ಮೆಟ್ಟಿಲುಗಳು ಅಲ್ಲಲ್ಲಿ ಒಂದೊಂದು ಕಾಣ್ತಾ ಇತ್ತು...
ಅದ್ರ ಜಾಡು ಹಿಡ್ಕೊಂಡು ಇಳಿಯೋಕೆ ಶುರು ಮಾಡಿದ್ವಿ...
ಮಧ್ಯೆ ಮಧ್ಯೆ ಎಷ್ಟೆಲ್ಲಾ ಶಾರ್ಟ್ ಕಟ್ ದಾರಿಗಳು ಬಂದರೂ ಸುಪ್ರಿಯ ಅಂತು ಬೇಡ ಬೇಡ ಜಾರೋದ್ರೆ ಅಂತ ಹೆದ್ರಸ್ತಿದ್ಲು...    
ಸರಿ... ನೇರ ದಾರಿಲೇ ಕೆಳಗಿಳದ್ವಿ...
ಆ ಜೋಗದ ಗುಂಡಿ ನೀರಲ್ಲಿ ಆಟ ಆಡದ್ವಿ...
ಮೇಲಿನಿಂದ ಬೀಳೋ ಶರಾವತಿ ನೀರನ್ನ ಕೆಳಗಿಂದ ಮೇಲ್ವರೆಗೂ ಕುತ್ತಗೆ ನೋವಾಗೊವರೆಗೂ ನೋಡಿದ್ವಿ... 
ಕೈಯಗಲಕ್ಕೆ ಸಿಗೋಷ್ಟು ಅಂತರದಲ್ಲಿ,,, ಕಣ್ಣಳತೆ ದೂರದಲ್ಲಿ ಕಾಮನಬಿಲ್ಲು ನೋಡಿದ್ವಿ....

ಮಧ್ಯಾನವಾದ ಹಾಗೆ ಹೊಟ್ಟೆ ತಾಳ ಹಾಕೋಕೆ ಶುರು ಮಾಡ್ತು...
ಎಲ್ಲ ಮೇಲೆ ಹತ್ತೋಕೆ ಶುರು ಮಾಡಿದ್ವಿ...
ಕೆಳಗೆ ಇಳಿಬೇಕಾದ್ರೆ ಕಾಲ್ನೋವು ಅಂತ ಇದ್ದ ಸುಪ್ರಿಯ ಎಲ್ಲರಿಗಿಂತ ಹಿಂದೆ...

ಅವಳು ಬಿದ್ದೋದ್ರೆ ಮತ್ತೆ ಕೆಳಗೆ ಹೋಗಿ ಕರ್ಕೊಂಡು ಬರೋವ್ರು ಯಾರು ಅಂತ ಹೆದರಿ ಅವಳ ಹಿಂದೆ ನಮ್ಮತ್ತೆ ತಮ್ಮ...
ನಿಂತರೆ ಎಲ್ಲಿ ಪೂರ್ತಿ ನಿಂತೇ ಹೋಗ್ತಿನೇನೋ ಅಂತ ಭಯ ಇದ್ದ ನಾನು ಎಲ್ಲರಿಗಿಂತ ಮುಂದೆ....

ಅಂತೂ ಇಂತೂ ಮೇಲಿ ಹತ್ತಿ ಬಂದೆ....
ಹಿಂದೆ ನೋಡ್ತೀನಿ ಯಾರು ಇಲ್ಲ.... 
ಸರಿ ಅಲ್ಲೇ ಕೂತು ಗಟ್ಟಿಯಾಗಿ ಉಸಿರು ತಗೊಂಡು ಉಳಿದವರಿಗೊಸ್ಕರ ಕಾಯ್ತಾ ಕೂತೆ..
ಸ್ವಲ್ಪ ಹೊತ್ತಿಗೆಲ್ಲ ಸುಪ್ರಿಯ, ಅವಳ ಬಾಡಿಗಾರ್ಡ್(ಸಂತೋಶಣ್ಣ),ರಾಧಿಕಾ ಬಿಟ್ಟು ಉಳದವರೆಲ್ಲ ಬಂದ್ರು...
ಅವರಿಬ್ರು ಬರೋವರ್ಗೆ ನಾವು ಮುಂದೆ ಹೋಗಿ ಏನಾದ್ರು ತಿನ್ನೋಕೆ ಆರ್ಡರ್ ಕೊಟ್ಟಿರೋಣ ಅಂತ ನಿರ್ಧಾರ ಮಾಡಿ ಹೊರಡಬೇಕು ಅಂತ ನೋಡ್ತಿವಿ...

ನನ್ನ ಚಪ್ಪಲ್ ನಾಪತ್ತೆ....!!!
ಚಪ್ಪಲ್ ಇಲ್ದೆ ನಾನು ಹೇಗಪ್ಪ ಓಡಾಡೋದು? 
ಕೆಳಗೆ ಬಿಟ್ಟು ಬಂದ್ನೇನೋ ಅಂತ ಅನುಮಾನ ಶುರುವಾಯ್ತು...

ಎಲ್ಲಾ ಬರಿಕಾಲಲ್ಲೇ ಹೋದ್ರಾಯ್ತು ಬಿಡು ಮತ್ತೆ ಅಲ್ಲಿಗೋಗಿ ತರೋಕಂತು ಸಾಧ್ಯ ಇಲ್ಲ...
ಜೊತೆಗೆ ಅಲ್ಲಿ ಯಾವ ಚಪ್ಪಲಿ ಅಂಗಡಿನು ಇಲ್ಲ...
ಎಲ್ಲರಿಗಿಂತ ಮೊದ್ಲು ಓಡೋಡಿ ಬರೋಕಾಯ್ತು... ಕಾಲಲ್ಲಿ ಚಪ್ಪಲಿ ಇದ್ಯೋ ಇಲ್ವೋ ಅಂತ ನೋಡ್ಕೊಂಡು ಬರೋಕೆ ಆಗ್ಲಿಲ್ವಾ?
ಹೀಗೆ ತಲೆಗೊಂದು ಮಾತಾಡೋಕೆ ಶುರು ಮಾಡಿದ್ರು....
ನಾನೋ ಇದೇನಪ್ಪ ಹೀಗಾಗೋಯ್ತು ಅಂತ ತಲೆ ಮೇಲೆ ಕೈ ಹೊತ್ಕೊಂಡು ಕುತಗೊಂಡುಬಿಟ್ಟೆ..... 

ಅಷ್ಟೊತ್ತಿಗೆ ಇಳಿ ಬೇಕಾದರೆ ಬೇಡ ಬೇಡ ಅಂತ ಹೇಳಿದ ಶಾರ್ಟ್ ಕಟ್ನೆಲ್ಲಾ ಬಳಸ್ಕೊಂಡು ಮೇಲ್ಹತ್ತಿ ಬಂದು ಏದುಸಿರು ತೆಗಿಯೋಕೆ ಶುರು ಮಾಡಿದ್ಲು ನಮ್ಮಕ್ಕ ಸುಪ್ರಿಯ....

ಸರಿ ಮುಂದೆ ಹೊರಡೋಣ ಅಂತ ಎಲ್ಲಾ ಹೊರಟರು..
ನಾನು ಹಿಂದೆ ಮುಂದೆ ನೋಡೋಕೆ ಶುರು ಮಾಡ್ದೆ.. ಬರಿಕಾಲಲ್ಲಿ ಹೋಗಬೇಕಲ್ಲ ಅಂತ..

ಆಗ ವಿಷಯ ತಿಳಿದ ಸಂತೋಶಣ್ಣ ಮುಂದೆಲ್ಲಾದ್ರು ಚಪ್ಪಲ್ ತಗೊಳೋಣ ಬಾ ಅಂತ ಸಮಾಧಾನ  ಮಾಡೋಕೆ ಅಂತ ಬಂದವನು ಗೊಳ್ಳೆಂದು ನಗೋಕೆ ಶುರು ಮಾಡ್ದ ...
ಯಾಕೆ ಅಂತ ನೋಡಿದ್ರೆ ನಾನು ಕೂತ ಕಲ್ಲಿನ ಪಕ್ಕದಲ್ಲೇ ನನ್ ಚಪ್ಪಲ್ ಇತ್ತು...

ಅಸಲು ಆಗಿದ್ದೆನಂದ್ರೆ ಹತ್ತಿದರೆ ಸಾಕಪ್ಪ ಅನ್ನೋ ಅಬ್ಭರದಲ್ಲಿ ಬೇಗ ಬೇಗ ಹತ್ತಿ ಬಂದ್ನಲ್ಲ ಆವಾಗ
ಕಾಲು ಜಾರುತ್ತೆ ಅಂತ ಚಪ್ಪಲ್ಲಿ ಕೈಯಲ್ಲಿ ಹಿಡ್ಕೊಂಡು ಬಂದಿದ್ದೆ...
ಬಂದು ಕೂತವಳು ಅದನ್ನ ನಾನ್ ಕೂತ ಕಲ್ಲಿನ ಹಿಂದೆ ಇಟ್ಟುಬಿಟ್ಟಿದ್ದೆ...

ಎಲ್ಲಾರು ಹತ್ತಿ ಬಂದಿರೋ ಸುಸ್ತನ್ನು ಮರೆತು ಹೊಟ್ಟೆಹುಣ್ಣಾಗುವಷ್ಟು ನಕ್ಕಿದ್ರು...
ಈಗಲೂ ಎಲ್ಲಾರೂ ಹೇಳ್ತಾನೆ ಇರ್ತಾರೆ ಸರಿತಂಗೆ ಪೂರ್ತಿ ಸುಸ್ತಾದರೆ ಕೈಯಲ್ಲಿ ಇರೋದನ್ನ ಕೂಡ ಮರ್ತುಬಿಡ್ತಾಳೆ ಅಂತ...