ಮೇ 18, 2013

ಹೀಗೇಕೆ ???


ಅವಳೇಕೆ ಹೀಗೆ?

ಇಲ್ಲಾ ನಾನೇ ಹೀಗಾ?

ನನ್ನ ಮನಸ್ಸೇ ಹೀಗಾ?

ಕೇಳಿದ್ರೆ ಹೇಳ್ತಾಳೆ  "ನೀನೇ ನನ್ನ ಜೀವನ, ನೀನಿಲ್ಲದೆ ನಾನಿಲ್ಲಾ....."

ಆದರೆ ನನ್ನಿಂದ ದೂರ ಇರೋದೇ ಅವಳಿಗಿಷ್ಟ..... 

ನಾನೇ  ಅವಳನ್ನ ಅರ್ಥ ಮಾಡ್ಕೊಂಡಿಲ್ವಾ??? 

ಇಷ್ಟು ವರುಷಗಳನಂಥರನೂ......???

ಅಂದ್ರೆ ನನ್ನ ಪ್ರೀತಿಯಲ್ಲೇ ಎಲ್ಲೋ ಕೊರತೆ ಇದೆ.... 

ನಾನೇ ಹೇಳ್ತಿದಿನಲ್ಲಾ ...... ಇದರಲ್ಲಿ ಅವಳ ತಪ್ಪೇನು ಇಲ್ಲಾ ..... ಯಾಕೆ ಗೊತ್ತಾ ?

ಹನ್ನೆರಡು ವರುಷದ ಸ್ನೇಹ, ಒಡನಾಟ, ಪ್ರೀತಿಯ ನಂತರವೂ ಈ ತರಹದ ಪ್ರಶ್ನೆ ಹೋಗ್ಲಿ ಯೋಚ್ನೆನಾದ್ರು ಯಾಕ್ ಬರಬೇಕು ಅಲ್ವಾ ...???

ಅಂದ್ಮೇಲೆ ತಪ್ಪು ಯಾರದ್ದು ಹೇಳಿ ......??? 

ನನ್ನದೇ ....... 


ನನ್ನವಳಿಗೆ ಯಾವಾಗಲೂ ನಿನ್ನೊಂದಿಗೆ ನಾನಿದ್ದೇನೆ ಅಂತ ನಂಬಿಸಿ, ಈಗ ಈ ತರಹದ ಪ್ರಶ್ನೆಗಳನ್ನ ಕೇಳಿ ಅವಳ ಮನಸ್ಸಿಗೆ ಗಾಯ ಮಾಡಿ ಇಲ್ಲಿ  ನಿಮ್ಮತ್ರ ಏನು .. ಕಣಿ ಕೇಳ್ತಿದೀನಿ ಅಂತ ಅನ್ಕೊಂಡ್ರ......???


ಹೇ.... 
ಇರಿ...... ಸ್ವಲ್ಪ....
ಅಲ್ಲಾ ನಾನು ನಿಮ್ಮತ್ರ ಇದಕ್ಕೆ ಪರಿಹಾರ....ಅಥವಾ ಏನ್ ಮಾಡ್ಲಿ ಅಂತ ಕೇಳೋಕೆ ಪ್ರಯತ್ನ ಮಾಡ್ತಿದೀನಿ ಅನ್ಕೊಂಡ್ರ....???


ಇಲ್ಲ ಕಣ್ರೀ !!!!!!!!!!!

ನನ್ನವಳನ್ನ ನಾನು ತುಂಬಾ ಪ್ರೀತಸ್ತೀನಿ...... 

ನಾನು ಅವಳನ್ನ ಎಷ್ಟು ಪ್ರೀತಿಸ್ತಿನೋ...  ಅದರ ಒಂದು ಕೈ ಮೇಲೆ ಅವ್ಳು ನನ್ನ ಪ್ರೀತಸ್ತಾಳೆ ಕಣ್ರೀ ...... 

ಅದ್ಕೆ ನಾನು ಏನೇ ತಪ್ಪು ಮಾಡಿದ್ರು ಒಂದು ಬಾರಿ ಸಾರೀ ಕೇಳದ್ರೆ ಸಾಕು ಹಾಗೇ ಕರಗಿಬಿಡ್ತಾಳೆ....... !!!!!

ಬೆಣ್ಣೆಯಂತೆ...... ಮೇಣದ ಬತ್ತಿಯಂತೆ...... ಮಂಜುಗಡ್ಡೆಯಂತೆ..... 

ಇನ್ನು ಹೇಳ್ಬೇಕು ಅಂದ್ರೆ ಐಸ್ ಕ್ರೀಂ ಥರ .......

ಅದೇ ಕಣ್ರೀ ಭಯ......  !!!!!! 

ಭಯ ಯಾಕೆ ಅಂತೀರಾ.....??? 

ಅವ್ಳು ನನ್ನ ಎಷ್ಟು ಬಾರಿ ಕ್ಷಮಿಸಿದಾಳೆ ಅಂದ್ರೆ .... 

ನಾನು ನನಗೇ ಗೊತ್ತಿಲ್ಲದಂತೆ ಇದನ್ನೇ ಅಭ್ಯಾಸ ಮಾಡ್ಕೊಂಡು ಬಿಟ್ಟಿದೀನಿ.... 

ನೀವೇ ಹೇಳಿ ..... ಒಬ್ಬ ಮನುಷ್ಯ ಎಷ್ಟು ತಪ್ಪುಗಳನ್ನ ಕ್ಷಮಿಸಬಲ್ಲಾ ???

ಅದಕ್ಕೆ ಭಯ...... ನನ್ನವಳು ಯಾವಾಗಾದ್ರು ನಿಜವಾಗಲು ನನ್ನ ಮೇಲೆ ಸಿಟ್ಟು ಮಾಡ್ಕೊಂಡ್ರೆ ???

ಅಂಥ ತಪ್ಪೆನಾದ್ರು ನಾನು ಮಾಡಿದ್ರೆ ??? 

ಅದೆಲ್ಲಾ ಇರಲಿ, ಈಗ ಅಂತದ್ದೇನು ಮಾಡಿದ್ದೆ ಅಂತಾ ಕೇಳಲ್ವ???

ಎರಡು ವರುಷಗಳ ನಂತರ ಮತ್ತೆ ಬರೆಯುವ ಪ್ರಯತ್ನ ಮಾಡುತ್ತಿದ್ದೇನೆ.....

ನಿಮ್ಮೆಲ್ಲರ  ಪ್ರೋತ್ಸಾಹದ  ನೀರೀಕ್ಷೆಯಲ್ಲಿ ....... 

ಮಾರ್ಚ್ 11, 2011

ಕಣ್ಣೆದುರೇ ಇದ್ದರೂ....

ಕಣ್ಣೆದುರೇ ಇದ್ದರೂ....


ಸಾಮಾನ್ಯವಾಗಿ ಎಲ್ಲರೂ ಹೀಗೆ....
ಒಂದಲ್ಲ ಒಂದು ಸಮಯದಲ್ಲಿ ಈ ಮಾತನ್ನ ಹೇಳೇ ಹೇಳ್ತಿವಿ....
"ಕಣ್ಣೆದುರಿಗೆ ಇದ್ರೂ ಕಾಣಲ್ಲ... ಇನ್ನು ಬೇರೆ ಎಲ್ಲಾದರೂ ಇದ್ರೆ ಹೇಗ್ ಹುಡುಕುತ್ತಾರೆ ಇವ್ರು ಅಂತ..."
ಇದು ನಮ್ಮ ಅನುಭವಕ್ಕೂ ಬಂದಿರತ್ತೆ...ಎಷ್ಟೋಸಲಾ...

ಅರ್ಥ ಆಗ್ಲಿಲ್ಲ.......!!!? 

ಈ  ಚಿಕ್ಕಪುಟ್ಟ ಮರೆವಿಗೆ.... ಕೆಲ ಉದಾಹರಣೆ ಹೇಳಲಾ...

ಕಿಸೆಯಲ್ಲೇ ಪೆನ್ನು ಇರತ್ತೆ... ಆದ್ರೆ ಆ ಪೆನ್ನು ಕಾಣ್ತಾ ಇಲ್ಲ ಅಂತ ಅಪ್ಪ ಮಕ್ಕಳ ಮೇಲೆ ಸಿಕ್ಕಾಪಟ್ಟೆ ರೇಗೋದು...
ಬೇಕಾಗಿರೋ ಪುಸ್ತಕ ಎದ್ರಿಗೆ ಇದ್ರೂ ಕಾಣ್ತಾ ಇಲ್ಲ ಅಂತ ಮಕ್ಕಳು ಕೂಗೋದು... 
ಡ್ರೆಸ್ ಹಾಕ್ಕೊಂಡಾದ ಮೇಲೆ ಕೆಲವು ಹುಡ್ಗಿಯರಿಗೆ ಅದ್ರ ದುಪಟ್ಟ ಅದ್ರ ಜೊತೆಗೇನೆ ಇದ್ರೂ ಕೈಗೆ ಸಿಗಲ್ಲ....
ಆಫೀಸಿಗೆ ಹೊರಟ ಗಂಡನಿಗೆ ಅಲ್ಲೇ ಎದುರಿಗೆ ಇರೋ ಖರ್ಚಿಫ್ ಸಿಗೋದು ಕಷ್ಟ....
ಇದೆಲ್ಲಾ ಚಿಕ್ಕಪುಟ್ಟ ಅನ್ಸಿದ್ರು ಆಮೇಲೆ ಯಾವಾಗಾದ್ರೂ ನೆನೆಸಿಕೊಂಡರೆ ನಗು ಬರೋತ್ತೆ... 
ಅದೇನ್ ಮಹಾ ವಿಷಯ... ಅಂತೀರಾ...?
ಅದೆಲ್ಲ ಚಿಕ್ಕಚಿಕ್ಕ ಮರೆವು.... ಅಂತೀರಾ...?
ಇಂಥ ಚಿಕ್ಕ ಪುಟ್ಟ ಮರೆವೆ ಒಂದೊಂದ್ಸಲ ಎಂತಾ ಮುಜುಗರ ಉಂಟುಮಾಡುತ್ತೆ  ಗೊತ್ತ? 

ಸರಿ....
ನಾನು ನಂದೇ ಒಂದು ಉದಾಹರಣೆ ಹೇಳ್ತೀನಿ
ನಾನು ಪಿ.ಯು.ಸಿ ಓದ್ತಾ ಇದ್ದ ಸಮಯ...
ಅಕ್ಟೋಬರ್ ರಜೆಲಿ ನಾನು,ನನ್ನ ಅಕ್ಕಂದಿರಿಬ್ರು (ಸೀಮಾ, ಸುಪ್ರಿಯ), ನನ್ನ ಅತ್ತೆಯ ಮಕ್ಕಳು ಇಬ್ರು (ರಾಧಿಕಾ,ಶ್ರೀಧರ), ನನ್ನ ಸಣ್ಣತ್ತೆಯ ತಮ್ಮ (ಸಂತೋಷ) ಅವ್ನ ಊರವರಿಬ್ರು ಸೇರಿ ಸಾಗರದತ್ರ ಇರೋ ಜಗತ್ಪ್ರಸಿದ್ಧ ಜೋಗ ಜಲಪಾತಕ್ಕೆ ಹೋಗಿದ್ವಿ...
ಬೆಳಗ್ಗೆ ಬೇಗ ಹೊರಟಿದ್ವಿ... ಬೇಗ ಹೋಗಿ ಬೇಗ ಬರಬಹುದು ಅಂತ... ಅಂತು ಎರಡು ಬಸ್ ಹತ್ತಿ ಇಳದು ಮಾಡಿ ಹೋಗೋವರೆಗೆ ೯.೩೦ ಆಗಿತ್ತು...
ಸರಿ.... ಹೇಗಿದ್ರು ಬೆಳಗ್ಗೆನೇ  ತಿಂಡಿ ತಿನ್ಕೋ ಬಂದಿದ್ವಲ್ಲ ... ಮಧ್ಯಾನ ಊಟದ ಸಮಯದೊಳಗೆ ಕೆಳಗಡೆ ಇಳಿದು ಮೇಲೆ ಹತ್ತಿ ಬರಬೋದು ಅಂತ ಪ್ಲಾನ್ ಹಾಕ್ಕೊಂಡು ಒಂದೆರಡು ಕೋಲ್ಡ್ ಡ್ರಿಂಕ್ಸ್ ಬಾಟಲ್ಗಳನ್ನೂ, ತಿನ್ನೋಕೆ ಸ್ವಲ್ಪ ತಿಂಡಿ ಎಲ್ಲ ತಗೊಂಡು ಇಳಿಯೋಕೆ ಶುರು ಮಾಡಿದ್ವಿ... 

ಅವಾಗಿನ್ನು ಈಗಿನ ತರಹ ಮೆಟ್ಟಿಲುಗಳನ್ನ ಮಾಡಿರಲಿಲ್ಲ ಇಳಿಯೋಕೆ...
ಹಳೆ ಕಾಲದಲ್ಲಿ ಮಾಡಿದ ಮೆಟ್ಟಿಲುಗಳು ಅಲ್ಲಲ್ಲಿ ಒಂದೊಂದು ಕಾಣ್ತಾ ಇತ್ತು...
ಅದ್ರ ಜಾಡು ಹಿಡ್ಕೊಂಡು ಇಳಿಯೋಕೆ ಶುರು ಮಾಡಿದ್ವಿ...
ಮಧ್ಯೆ ಮಧ್ಯೆ ಎಷ್ಟೆಲ್ಲಾ ಶಾರ್ಟ್ ಕಟ್ ದಾರಿಗಳು ಬಂದರೂ ಸುಪ್ರಿಯ ಅಂತು ಬೇಡ ಬೇಡ ಜಾರೋದ್ರೆ ಅಂತ ಹೆದ್ರಸ್ತಿದ್ಲು...    
ಸರಿ... ನೇರ ದಾರಿಲೇ ಕೆಳಗಿಳದ್ವಿ...
ಆ ಜೋಗದ ಗುಂಡಿ ನೀರಲ್ಲಿ ಆಟ ಆಡದ್ವಿ...
ಮೇಲಿನಿಂದ ಬೀಳೋ ಶರಾವತಿ ನೀರನ್ನ ಕೆಳಗಿಂದ ಮೇಲ್ವರೆಗೂ ಕುತ್ತಗೆ ನೋವಾಗೊವರೆಗೂ ನೋಡಿದ್ವಿ... 
ಕೈಯಗಲಕ್ಕೆ ಸಿಗೋಷ್ಟು ಅಂತರದಲ್ಲಿ,,, ಕಣ್ಣಳತೆ ದೂರದಲ್ಲಿ ಕಾಮನಬಿಲ್ಲು ನೋಡಿದ್ವಿ....

ಮಧ್ಯಾನವಾದ ಹಾಗೆ ಹೊಟ್ಟೆ ತಾಳ ಹಾಕೋಕೆ ಶುರು ಮಾಡ್ತು...
ಎಲ್ಲ ಮೇಲೆ ಹತ್ತೋಕೆ ಶುರು ಮಾಡಿದ್ವಿ...
ಕೆಳಗೆ ಇಳಿಬೇಕಾದ್ರೆ ಕಾಲ್ನೋವು ಅಂತ ಇದ್ದ ಸುಪ್ರಿಯ ಎಲ್ಲರಿಗಿಂತ ಹಿಂದೆ...

ಅವಳು ಬಿದ್ದೋದ್ರೆ ಮತ್ತೆ ಕೆಳಗೆ ಹೋಗಿ ಕರ್ಕೊಂಡು ಬರೋವ್ರು ಯಾರು ಅಂತ ಹೆದರಿ ಅವಳ ಹಿಂದೆ ನಮ್ಮತ್ತೆ ತಮ್ಮ...
ನಿಂತರೆ ಎಲ್ಲಿ ಪೂರ್ತಿ ನಿಂತೇ ಹೋಗ್ತಿನೇನೋ ಅಂತ ಭಯ ಇದ್ದ ನಾನು ಎಲ್ಲರಿಗಿಂತ ಮುಂದೆ....

ಅಂತೂ ಇಂತೂ ಮೇಲಿ ಹತ್ತಿ ಬಂದೆ....
ಹಿಂದೆ ನೋಡ್ತೀನಿ ಯಾರು ಇಲ್ಲ.... 
ಸರಿ ಅಲ್ಲೇ ಕೂತು ಗಟ್ಟಿಯಾಗಿ ಉಸಿರು ತಗೊಂಡು ಉಳಿದವರಿಗೊಸ್ಕರ ಕಾಯ್ತಾ ಕೂತೆ..
ಸ್ವಲ್ಪ ಹೊತ್ತಿಗೆಲ್ಲ ಸುಪ್ರಿಯ, ಅವಳ ಬಾಡಿಗಾರ್ಡ್(ಸಂತೋಶಣ್ಣ),ರಾಧಿಕಾ ಬಿಟ್ಟು ಉಳದವರೆಲ್ಲ ಬಂದ್ರು...
ಅವರಿಬ್ರು ಬರೋವರ್ಗೆ ನಾವು ಮುಂದೆ ಹೋಗಿ ಏನಾದ್ರು ತಿನ್ನೋಕೆ ಆರ್ಡರ್ ಕೊಟ್ಟಿರೋಣ ಅಂತ ನಿರ್ಧಾರ ಮಾಡಿ ಹೊರಡಬೇಕು ಅಂತ ನೋಡ್ತಿವಿ...

ನನ್ನ ಚಪ್ಪಲ್ ನಾಪತ್ತೆ....!!!
ಚಪ್ಪಲ್ ಇಲ್ದೆ ನಾನು ಹೇಗಪ್ಪ ಓಡಾಡೋದು? 
ಕೆಳಗೆ ಬಿಟ್ಟು ಬಂದ್ನೇನೋ ಅಂತ ಅನುಮಾನ ಶುರುವಾಯ್ತು...

ಎಲ್ಲಾ ಬರಿಕಾಲಲ್ಲೇ ಹೋದ್ರಾಯ್ತು ಬಿಡು ಮತ್ತೆ ಅಲ್ಲಿಗೋಗಿ ತರೋಕಂತು ಸಾಧ್ಯ ಇಲ್ಲ...
ಜೊತೆಗೆ ಅಲ್ಲಿ ಯಾವ ಚಪ್ಪಲಿ ಅಂಗಡಿನು ಇಲ್ಲ...
ಎಲ್ಲರಿಗಿಂತ ಮೊದ್ಲು ಓಡೋಡಿ ಬರೋಕಾಯ್ತು... ಕಾಲಲ್ಲಿ ಚಪ್ಪಲಿ ಇದ್ಯೋ ಇಲ್ವೋ ಅಂತ ನೋಡ್ಕೊಂಡು ಬರೋಕೆ ಆಗ್ಲಿಲ್ವಾ?
ಹೀಗೆ ತಲೆಗೊಂದು ಮಾತಾಡೋಕೆ ಶುರು ಮಾಡಿದ್ರು....
ನಾನೋ ಇದೇನಪ್ಪ ಹೀಗಾಗೋಯ್ತು ಅಂತ ತಲೆ ಮೇಲೆ ಕೈ ಹೊತ್ಕೊಂಡು ಕುತಗೊಂಡುಬಿಟ್ಟೆ..... 

ಅಷ್ಟೊತ್ತಿಗೆ ಇಳಿ ಬೇಕಾದರೆ ಬೇಡ ಬೇಡ ಅಂತ ಹೇಳಿದ ಶಾರ್ಟ್ ಕಟ್ನೆಲ್ಲಾ ಬಳಸ್ಕೊಂಡು ಮೇಲ್ಹತ್ತಿ ಬಂದು ಏದುಸಿರು ತೆಗಿಯೋಕೆ ಶುರು ಮಾಡಿದ್ಲು ನಮ್ಮಕ್ಕ ಸುಪ್ರಿಯ....

ಸರಿ ಮುಂದೆ ಹೊರಡೋಣ ಅಂತ ಎಲ್ಲಾ ಹೊರಟರು..
ನಾನು ಹಿಂದೆ ಮುಂದೆ ನೋಡೋಕೆ ಶುರು ಮಾಡ್ದೆ.. ಬರಿಕಾಲಲ್ಲಿ ಹೋಗಬೇಕಲ್ಲ ಅಂತ..

ಆಗ ವಿಷಯ ತಿಳಿದ ಸಂತೋಶಣ್ಣ ಮುಂದೆಲ್ಲಾದ್ರು ಚಪ್ಪಲ್ ತಗೊಳೋಣ ಬಾ ಅಂತ ಸಮಾಧಾನ  ಮಾಡೋಕೆ ಅಂತ ಬಂದವನು ಗೊಳ್ಳೆಂದು ನಗೋಕೆ ಶುರು ಮಾಡ್ದ ...
ಯಾಕೆ ಅಂತ ನೋಡಿದ್ರೆ ನಾನು ಕೂತ ಕಲ್ಲಿನ ಪಕ್ಕದಲ್ಲೇ ನನ್ ಚಪ್ಪಲ್ ಇತ್ತು...

ಅಸಲು ಆಗಿದ್ದೆನಂದ್ರೆ ಹತ್ತಿದರೆ ಸಾಕಪ್ಪ ಅನ್ನೋ ಅಬ್ಭರದಲ್ಲಿ ಬೇಗ ಬೇಗ ಹತ್ತಿ ಬಂದ್ನಲ್ಲ ಆವಾಗ
ಕಾಲು ಜಾರುತ್ತೆ ಅಂತ ಚಪ್ಪಲ್ಲಿ ಕೈಯಲ್ಲಿ ಹಿಡ್ಕೊಂಡು ಬಂದಿದ್ದೆ...
ಬಂದು ಕೂತವಳು ಅದನ್ನ ನಾನ್ ಕೂತ ಕಲ್ಲಿನ ಹಿಂದೆ ಇಟ್ಟುಬಿಟ್ಟಿದ್ದೆ...

ಎಲ್ಲಾರು ಹತ್ತಿ ಬಂದಿರೋ ಸುಸ್ತನ್ನು ಮರೆತು ಹೊಟ್ಟೆಹುಣ್ಣಾಗುವಷ್ಟು ನಕ್ಕಿದ್ರು...
ಈಗಲೂ ಎಲ್ಲಾರೂ ಹೇಳ್ತಾನೆ ಇರ್ತಾರೆ ಸರಿತಂಗೆ ಪೂರ್ತಿ ಸುಸ್ತಾದರೆ ಕೈಯಲ್ಲಿ ಇರೋದನ್ನ ಕೂಡ ಮರ್ತುಬಿಡ್ತಾಳೆ ಅಂತ...  

ಫೆಬ್ರವರಿ 19, 2011

ಇದ್ದರೆ ಇರಬೇಕು...


ಇದ್ದರೆ ಇರಬೇಕು....

ಮನೆಯೊಳಗಾಡುವ ಮಗು...
ಮನದೊಳು ಆಡುವಂತಿರಬೇಕು...
ಮನದೊಳಾಡುವ ಮಗು...
ಮುಂದೊಂದುದಿನ ಜಗದೊಳು...
ಎಲ್ಲರಲ್ಲೊಂದಾಗಿ ಆಡುವಂತಿರಬೇಕು...

ಇದ್ದರೆ ಇರಬೇಕು...

ಮುಗುಳುನಗುವ ತಾಯಿ...
ಎಂದೆಂದೂ ನಗುತಿರಬೇಕು...
ಮಗುವನ್ನು ತನ್ನಿಂದ ಅಗಲಿಸಿಯಾದರೂ...
ಮಗುವಿನ ಭವ್ಯ ಭವಿಷ್ಯಕ್ಕೆ...
ಅಡಿಪಾಯ ಇಡುವಂತಿರಬೇಕು...

ಇದ್ದರೆ ಇರಬೇಕು...

ಎಲ್ಲ ಹೊರೆ ತನ್ನದೆನ್ನುವ ತಂದೆ...
ಎಂದೆಂದೂ ಅಭಿಮಾನದಿಂದಿರಬೇಕು...
ಮಕ್ಕಳ ವಿಜಯದ ಆಧಾರವಾಗಿ...
ಸೋಲಿನಲ್ಲಿ ಬೆನ್ನುತಟ್ಟಿ...
ಜೊತೆನಡೆಯುವ ಗೆಳೆಯನಾಗಿರಬೇಕು...

ಇದ್ದರೆ ಇರಬೇಕು...

ಹೃದಯದಲ್ಲಿರುವ ಬಾಳಸಂಗಾತಿ...
ಮನಸ್ಸನ್ನು ಬೆಚ್ಚಗಿಡುವಂತಿರಬೇಕು...
ಎಂದೆಂದೂ ಜೊತೆ ಇರುವ...
ನಲಿವೆಂದೂ ಸುಳ್ಳಲ್ಲವೆಂದು...
ಸಾಧಿಸುವಂತಹ ನಲ್ಲನಿರಬೇಕು...

ಇದ್ದರೆ ಇರಬೇಕು...

ಜೊತೆಯಲ್ಲಿ ಹುಟ್ಟಿದ ಒಡಹುಟ್ಟಿದವರು... 
ಜೀವನಪೂರ್ತಿ ಒಗ್ಗಟ್ಟಾಗಿರಬೇಕು...
ಒಂದೇ ಸೂರಡಿ ಇರದಿದ್ದರೂ...
ಕೊನೆವರೆಗೂ ಒಂದೆನ್ನುವ...
ಭಾವನೆ ಮನದಲ್ಲಿರಬೇಕು...

ಇದ್ದರೆ ಇರಬೇಕು...

ಹೇಗೋ ಎಲ್ಲೋ ಸಿಕ್ಕ ಗೆಳೆಯರು...
ಹಿಂದಿನ ಜನ್ಮದ ನಂಟಿನಂತಿರಬೇಕು.... 
ಜಗವೆಂಬ ಮಾಯಾ ಜಂಜಾಟದಲಿ....
ನಿನ್ನೆ ಇಂದು ನಾಳೆ ರಾತ್ರೆ ಹಗಲೆನ್ನದೆ...
ಮನದ ಕದವ ತಟ್ಟುತಿರಬೇಕು...

ಇದ್ದರೆ ಇರಬೇಕು...

ಹುಟ್ಟಿನಿಂದ ಹುಟ್ಟಿಕೊಂಡ ಬಂಧುಗಳು....
ನಿಧಾನವಾಗಿಯಾದರೂ ಅರ್ಥವಾಗುವಂತಿರಬೇಕು...
ಅರ್ಥಕ್ಕೆ ಬೆಲೆಕೊಡದೆ...
ಜನರೊಡನೆ ತಾವು ಒಂದು...
ಎಂಬಂತಾಗದ ಸಂಬಂಧಿಕರಿರಬೇಕು...

ಇದ್ದರೆ ಇರಬೇಕು...
ಬದುಕಿರುವ ಕಾಲವೆಲ್ಲಾ...
ಮಲಗಿದಾಗಲೆಲ್ಲಾ...
ಈ ತರಹದ ಸುಂದರ ಕನಸುಗಳೆಲ್ಲಾ...
ಕಾಣುವಂತಿರಬೇಕು...

ಫೆಬ್ರವರಿ 1, 2011

ಆ ದಿನಗಳು.....

ಆ ದಿನಗಳು..... ದಿನ ಪ್ರತಿಕ್ಷಣ.... ಹೃದಯದೊಳಗೆ.......
ಯಾವ ದಿನಗಳು ಅಂತಿದೀರಾ?..... ಅದೇ ಆ ದಿನಗಳು....
ನಮಗೆ ಹೊರಲೋಕದ ಪರಿವೆಯೇ ಇಲ್ಲದ ದಿನಗಳು....
ಯಾವುದು ಹೇಳಿ?
ಅದೇ ನಮ್ಮ ಬಾಲ್ಯ...

ಅಬ್ಭಾ!!! ನನ್ನ ಬಾಲ್ಯವಂತೂ ನನಗೇನು ನನ್ನ ಸುತ್ತಮುತ್ತಲು ಇದ್ರಲ್ಲ ಆವಾಗ, ಅವರು ಕೂಡ ಮರಿಬೇಕೂ ಅಂತ ಶತಪ್ರಯತ್ನ ಮಾಡಿದ್ರು  ಮರೆಯೋದಿಲ್ಲ ಪಾಪ.... 
ಅಷ್ಟು ಕಿಲಾಡಿಯಾಗಿದ್ದೆ ನಾನು... ಮನೆಯಲ್ಲಿ ಕಿರಿಯ ಮಗಳು... ಮುದ್ದು ಜಾಸ್ತಿ... 
ಚಿಕ್ಕಂದಿನಲ್ಲಿ ಅಂಗನವಾಡಿಗೆ ಸೇರಿಸಿ ಅಮ್ಮ ವಾಪಾಸ್ ಬಂದ್ರೆ, ವಿರಾಮಕ್ಕೆ ಅಂತ ಬಿಟ್ಟಾಗ ಪಾಟೀಚೀಲ ತಗೊಂಡು ಸೀದಾ ಮನೆಗೆ ಓಡಿ ಬಂದವಳು ನಾನು... ಅಲ್ಲಿಂದ ಮತ್ತೆ ಬಾಲವಾಡಿಗೆ ಕಾಲಿಡಲಿಲ್ಲ ನಾನು....
ಅಮ್ಮ ಎಲ್ಲಿ ಹೋದರಲ್ಲಿ ನಾನು... ಜೊತೆಗೆ ನನ್ನ ಸೈನ್ಯ.... ಅಂದರೆ ನನ್ನ ಗೆಳೆಯರು.. (ಮೊದಲಿನಿಂದನು ಸ್ವಲ್ಪ ಜಾಸ್ತಿ ಅನ್ನಿಸುವಷ್ಟು ಗೆಳೆಯರು ನನಗೆ...) ಎಲ್ಲಾರಿಗೂ ಅಮ್ಮನೇ ವಿದ್ಯಾಭ್ಯಾಸದ ಮೊದಲ ಚರಣ ಹೇಳಿಕೊಟ್ಟಿದ್ದು...
ಯಾವಾಗ ಮೊದಲನೇ ತರಗತಿ ಸೇರಿದ್ನೋ ಆವಾಗಿನಿಂದ ಶುರು ನನ್ನ ಅಮೋಘ ಯಾತ್ರೆ...

ಮೊದಲಿಗೆ ಅಕ್ಕೊರನ್ನ ತುಂಬಾ ಬುದ್ದಿವಂತಳು ನಾನು ಅಂತ ಪ್ರೂವ್ ಮಾಡಿ ಬುಟ್ಟಿಗೆ ಹಾಕ್ಕೊಂಡು ಆಡಿದ ಆಟಗಳೆಷ್ಟೋ.... ?
ಲೆಕ್ಕಾನೆ ಇಲ್ಲ..... ಒಂದು ಶನಿವಾರನು ಡ್ರಿಲ್ ಮಾಡಿಯೇ ಇಲ್ಲ ನಾನು... 

ಅಂತದ್ರಲ್ಲಿ ಶಾಲೆಯ ಉತ್ತಮ ವಿಧ್ಯಾರ್ಥಿ ಪ್ರಶಸ್ತಿ ನನಗೆ ಕೊಡಿಸಬೇಕು ಅಂತ ಎಲ್ಲಾ ಅಕ್ಕೋರುಗಳು ಸೇರಿ ನನ್ನ ಸೇವಾದಲಕ್ಕೆ ಮತ್ತು ಖೋ ಖೋ ಗೆ ಸೇರಿಸಿ ನನ್ನ ಜೀವ ತಿಂದುಬಿಟ್ಟಿದ್ದರು...... ಕೊನೆಗೂ ನನಗೇ ಸಿಕ್ತು ಬಿಡಿ...
ಆ ದಿನಗಳಲ್ಲಿ ಪ್ರತಿನಿತ್ಯ ಒಂದು ಗ್ಲಾಸ್ ಹಾಲು ಕೊಡ್ತಿದ್ರಲ್ಲ... ನನಗೆ ಒಂದು ಬಾಟಲ್ ತುಂಬಾ ಅಕ್ಕೋರೆ ತಂದು ಕೊಡ್ತಿದ್ರು... ಯಾರಾದ್ರು ಶಾಲೆಗೆ ಅತಿಥಿಗಳು ಬಂದರೆ ಸಾಕು ಹಾಡು ಹೇಳು ಅಂತ ನಿಲ್ಲಿಸಿ ಬಿಡ್ತಿದ್ದರು... ನಾನು ಹಾಡ್ತಿದ್ದೆ.... ಒಂದೇ ಹಾಡು.... 
"ಮಳ್ಳಿ ಮಳ್ಳಿ ಮಿಂಚುಳ್ಳಿ.....ಜಾಣ ಜಾಣ ಕಾಜಾಣ..... ಪೂರ್ವ ಪೂರಾ ಕೆಂಪಾಯ್ತು...."
ನಿತ್ಯ ಗಾದೆಮಾತು,ಪಂಚಾಂಗ,ಸುದ್ದಿ ಓದೋದ್ರಲ್ಲಿ ಪ್ರತಿಸಲ ನಮ್ಮ ತರಗತಿಯ ಪಾಳಿಬಂದಾಗ ನಾನು ಯಾವುದಾದರು ಒಂದು ಓದಲೇಬೇಕಿತ್ತು.... ಅಷ್ಟು ದೊಡ್ಡ ಕೂಗುತ್ತಿದ್ದೆ ನಾನು ಅಂತ ಅದರರ್ಥ...
ಇನ್ನು ನನ್ನ ಫ್ರೆಂಡ್ಸ್ ಗ್ಯಾಂಗ್ ಬಗ್ಗೆ ಹೇಳ್ಬೇಕು ಅಂದ್ರೆ ನಾವು ನಾಲ್ಕು ಜನ ಹುಡ್ಗೀರು ನಾಲ್ಕು ಜನ  ಹುಡುಗ್ರು. ಮಾಡದೇ ಇರೋ  ಕಿತಾಪತಿ ಇಲ್ಲ... ಆದ್ರೆ ನಾವೇ ಶಾಲೆಗೆ ಫಸ್ಟ್... ಎಲ್ಲಾ ವರ್ಷನೂ... ಪ್ರತೀ ಶನಿವಾರ ಅರ್ಧದಿನ ಆದ್ರೂ ನಾವು ಟಿಫಿನ್ ಒಯ್ತಿದ್ವಿ... ಶಾಲೆ ಮುಗಿದ ಮೇಲೆ ಸೀದಾ ಕೆ.ಇ.ಬಿ.ಹಿಂದೆ ಇರೋ ಪುಟ್ಟನಮನೆ ಬ್ಯಾಣದಲ್ಲಿ ಆಟ ಆಡಿ ಸಂಜೆ ಆರಕ್ಕೆ ಮನೆಗೆ ಹೋಗ್ತಿದ್ವಿ ಎಲ್ಲಾರು... 

ಇಂಥ ಗುಂಪಿನ ಹೆಸರು ಇನ್ನೂ ಶಾಲೆಯ ನೋಟಿಸ್ ಬೋರ್ಡ್ನಲ್ಲಿ ಬರೆದಿದ್ದು ಇದೆ ಉತ್ತಮ ವಿಧ್ಯಾರ್ಥಿಗಳು ಅಂತ...!! (ಹ.. ಹ್ಹ...ಹ್ಹ)
ಇನ್ನು ಮನೆಲೋ ಎದುರಿಗೆ ಬ್ಯಾಣ,ಹಿಂದೆ ಗದ್ದೆ, ಪಕ್ಕದಲ್ಲಿ ದೊಡ್ಡ ಆಲದಮರದ ಚೌಡಿಕಟ್ಟೆ... ಇನ್ನು ನನ್ನ ಹಿಡಿಯುವವರು ಯಾರು?
ದಿನ ಅಲ್ಲಿ ಆಟ... ನನ್ನ ಹಿಡಿದು ಮನೆಗೆ ತರೋದೆ ಅಮ್ಮಂಗೆ ಒಂದು ದೊಡ್ಡ ಕೆಲಸವಾಗಿತ್ತು ದಿನಾ... ಅಮ್ಮ ಅಪ್ಪ ಈಗಲೂ ಹೇಳ್ತಾರೆ .... "ನಮ್ಮ ಮನೆಯ ಉಳಿದ ಇಬ್ಬರು ಕಾಟ ಕೊಡುವುದನ್ನು ಒಬ್ಬಳೇ ಕೊಟ್ಟು ಮುಗ್ಸಿಬಿಟ್ಟಿದ್ದಾಳೆ"ಅಂತ... ಪಾಪ...
ಪಾಪ ಅನ್ನೋಕು ಒಂದು ಕಾರಣ ಇದೆ...ನಮ್ಮ ಅಪ್ಪ ಎಲೆಕ್ಟ್ರಿಷಿಯನ್,,,, ಗೊತ್ತಲ್ಲ ಎಲ್ಲಾ ಎಲೆಕ್ಟ್ರಿಷಿಯನ್ ಮನೇಲೂ ಸುಮಾರಿಗೆ ಎಲ್ಲಾ ಎಲೆಕ್ಟ್ರಿಕಲ್ ವಸ್ತುಗಳು ಅಲ್ಲಿ ಇಲ್ಲಿ ಗಂಟೇಪ್ ಹಚ್ಚಿದ್ದೆ ಇರತ್ತೆ... ಹಾಗೆ ಜೋಡಿಸಿದ ಒಂದು ರೇಡಿಯೋ ಇತ್ತು... ಒಂದಿನ ನಾನು ಅಪ್ಪನತ್ರ ಕೇಳ್ದೆ "ಗಂಟೇಪ್ ಬಿಟ್ಟಿರೋ ಜಾಗದಲ್ಲಿ ಮುಟ್ಟರೆ ಏನಾಗತ್ತೆ?" ಅಂತ... ಅಪ್ಪ ಶಾಕ್ ಹೊಡಿಯುತ್ತೆ ಮುಟ್ಟಬಾರದು ಅಂತ ಹೇಳಿ ಹೋದ್ರೆ, ನಾನು ಅವರು ಹೋದ ಎರಡೇ ನಿಮಿಷಕ್ಕೆ ಒಂದು ದೊಡ್ಡ ನೀರು ತುಂಬುವ ಟಬ್ಬು ತಂದು ಅದ್ನ ಉಲ್ಟಾ ಮಾಡಿ ಹತ್ತಿ ಕೈಯಲ್ಲಿ ಹಿಡ್ದಿದ್ದೆ....
ಫುಲ್ ಷಾಕ್..... 
ಕೂಗೋಕೆ ಧ್ವನಿನೇ ಹೊರಡ್ತಾ ಇಲ್ಲಾ.... ನನ್ನ ಪುಣ್ಯ ಅಮ್ಮ ನನ್ನ ಗಲಾಟೆ ಇಲ್ವಲ್ಲ ಅಂತ ನೋಡೋಕೆ ಬರದೇ ಇದ್ರೆ ಹರೋಹರ ಅಗ್ಬಿಡ್ತಿದ್ದೆ ಆವಾಗ್ಲೇ...... ಅದರ ಗುರುತು ಈಗಲೂ ನನ್ನ ಕೈಯಲ್ಲಿ ಮತ್ತು ನಮ್ಮ ಮನೆಯ ಆ ಟಬ್ಬಿನಲ್ಲಿ ಉಳಿದಿದೆ.....
ಅಮ್ಮ ಅಪ್ಪನಿಗೆ ಈಗಲೂ ಒಂದು ಪ್ರಶ್ನೆಗೆ ಉತ್ತರಾನೇ ಸಿಕ್ಕಿಲ್ಲ... ಇಷ್ಟೆಲ್ಲಾ ಕಿತಾಪತಿ ಮಾಡುವ ನನ್ನ ಮೇಲೆ ಶಾಲೆಯಿಂದ ಯಾಕೆ ಒಂದೇ ಒಂದು ದೂರು ಬಂದಿಲ್ಲ ಅಂತ.... ಎಷ್ಟು ಕಾದಿದ್ದಾರೆ ಗೊತ್ತ ಬರಲಿ ಅಂತ..... ಅಮ್ಮ ಅಂತು ಕೇಳು ಕೇಳಿದ್ರು ನಮ್ಮ ಅಕ್ಕೋರತ್ರ....
ಅದ್ಹೇಗೆ ಸಾಧ್ಯ??? 
ನಾನು ತುಂಬಾ ಸಾಚಾ ಹೊರಗಡೆ..... ಹ ಹ್ಹ ಹ್ಹ ....
ಇದೆಲ್ಲ ಕೇವಲ ಕೆಲ ಉದಾಹರಣೆಗಳು ಅಷ್ಟೇ..!!!
ಇನ್ನೂ ಏನೇನೋ ದೊಡ್ಡದೊಡ್ಡ ಕಿತಾಪತಿಗಳ ಪಟ್ಟಿಯೇ ಇದೆ....
ಬಿಡಿ ಇಷ್ಟು ಸಾಕು...
ಈಗ ನಿಜ ಹೇಳಿ.... ನಿಮ್ಮ ಬಾಲ್ಯದ ನೆನಪಾಗಲಿಲ್ಲವೇ???
बार बार याद आती है 
मुज़को मधुर याद बचपन मेरी..... 

ಜನವರಿ 28, 2011

ತಾಯಿ

                 ನಗರದ ಜನಪ್ರಿಯ ಆಸ್ಪತ್ರೆಯ ದಾದಿ ನಾನು. ಒಂದು ಮಳೆಗಾಲದ ಮುಂಜಾವು ಜಿಟಿ ಜಿಟಿ ಮಳೆ ಹೊಡೆಯುತ್ತಲೇ ಇತ್ತು. ನನ್ನದು ರಾತ್ರಿಪಾಳಿ ಆಗಿತ್ತು. ಬೆಳಗ್ಗೆ ಎಂಟಕ್ಕೆಲ್ಲ ಕೆಲಸದ ಅವಧಿ ಮುಕ್ತಾಯ. ಸುಮಾರು ಆರು ಮೂವತ್ತರ ಸಮಯದಲ್ಲಿ ಒಂದು ಪೇಶಂಟನ್ನು (ಅಜ್ಜಿ) ಕರೆದುಕೊಂಡು ಮಧ್ಯವಯಸ್ಕ ದಂಪತಿಗಳು ಮತ್ತು ಒಂದು ಪ್ರಾಥಮಿಕ ಶಾಲೆಗೆ ಹೋಗುವ ಹುಡುಗಿ ಬಂದರು.ಅಜ್ಜಿ ಅಸ್ತಮಾದಿಂದ ನರಳುತ್ತಿದ್ದರು, ಜೊತೆಗೆ ಬಿ.ಪಿ. ಮತ್ತು ಶುಗರ್.ಅಜ್ಜಿಯ ಸ್ಥಿತಿ ಗಂಭೀರವಾಗಿತ್ತು.ಹತ್ತಿರದ ಯಾವುದೋ ಹಳ್ಳಿಯಿಂದ ಬಂದಿದ್ದರು.ಡಾಕ್ಟರು ಬಂದು ಪರೀಕ್ಷೆಮಾಡಿ, ನಮಗೆ ಕೆಲವು ಸೂಚನೆಗಳನ್ನು ಕೊಟ್ಟು ಹೋದರು.ನಾವು ಅಜ್ಜಿಯನ್ನು ಅಡ್ಮಿಟ್ ಮಾಡಿಕೊಂಡು ಡ್ರಿಪ್ ಇಂಜೆಕ್ಷನ್ನು   ಎಲ್ಲಾ ಕೊಟ್ಟು ಮುಗಿಸುವವರೆಗೆ ಎಂಟು ಮೂವತ್ತು.ನನ್ನ ಕೆಲಸದ ಅವಧಿ ಅಲ್ಲಿಗೆ ಮುಗಿದಿತ್ತು.
                 ಮತ್ತೆ ರಾತ್ರಿ ಆಸ್ಪತ್ರೆಗೆ ಬಂದು ಅರ್ಧತಾಸು ಕಳೆದಿರಬಹುದಷ್ಟೇ...ಅಜ್ಜಿ ಉಸಿರಾಡೋಕೆ ಕಷ್ಟಪಡ್ತಿದ್ದಾರೆ ಅಂತ ಚಿಕ್ಕ ಹುಡುಗಿ ಬಂದು ಕರೆದುಕೊಂಡು ಹೋದಳು.. ಅಲ್ಲಿ ಹೋಗಿ ನೋಡಿದರೆ ಅಜ್ಜಿ ಅಸ್ತಮ ಹೆಚ್ಚಾಗಿ ಉಸಿರಾಡೋಕೆ ಕಷ್ಟಪಡುತ್ತಿದ್ದರು.ಅವ್ರಿಗೆ ನೀಡುವ ಚಿಕಿತ್ಸೆ ನೀಡಿ ಅವ್ರು ಸ್ವಲ್ಪ ಸುಧಾರಿಸಿಕೊಂಡ ನಂತರನೇ ನನಗೆ ಲಕ್ಷ್ಯ ಬಂದಿದ್ದು ಅಜ್ಜಿಯ ಜೊತೆ ಈ ಚಿಕ್ಕ ಹುಡುಗಿಯ ಬಿಟ್ಟರೆ ಮತ್ಯಾರು ಇಲ್ಲ ಎಂದು.ಆ ಬಗ್ಗೆ ಸಹ ಸಿಬ್ಬಂದಿಯವರಲ್ಲಿ ಕೇಳಿದಾಗ ತಿಳಿದು ಬಂದದ್ದಿಷ್ಟು.ಅವರಿಬ್ಬರು ಅಜ್ಜಿಯ ಕಿರಿಮಗ ಸೊಸೆ,ಇಬ್ಬರೂ ಬೆಳಗ್ಗೆನೇ ಮುಂಗಡ ಹಣ ಪಾವತಿ ಮಾಡಿ ಅವರ ಮನೆಯಲ್ಲಿ ಓದಲೆಂದು ಇರುವ ಚಿಕ್ಕ ಮಗುವನ್ನು ಅಜ್ಜಿಯ ಜೊತೆಯಲ್ಲಿ ಬಿಟ್ಟು ಮನೆಗೆ ಹೋಗಿದ್ದಾರೆ ಅಂತ. ನಂಗೆ ಆಶ್ಚರ್ಯ ಜೊತೆಗೆ ಕೋಪನು ಬಂತು ಅವರ ಮೇಲೆ, ಅಂತ ಘನಕಾರ್ಯ ಏನಿರಬಹುದು ಅವರಿಗೆ ಅಂತ....ಬೆಳಗ್ಗೆ ಅಜ್ಜಿ ಸ್ವಲ್ಪ ಸುಧಾರಿಸಿದ್ದರು..ಎಲ್ಲರ ಬಳಿಯೂ ಮಾತನಾಡಲು ಆರಂಭಿಸಿದ್ದರು.
                            ಅಜ್ಜಿಯ ಮಗ ಸೊಸೆ ಹೀಗೆ ಒಬ್ಬರಲ್ಲ ಒಬ್ಬರು ಅಜ್ಜಿಯನ್ನು ನೋಡಲು ದಿನಾ ಬರುತ್ತಿದ್ದರು.ಅವರಿಗೆ ಮನೆಯಿಂದನೆ ಊಟ,ತಿಂಡಿ ಎಲ್ಲಾ ತರುತ್ತಿದ್ದರು. ಹೀಗೆ ಒಂದು ವಾರ ಕಳೆಯಿತು...ಈ ನಡುವೆ ನನ್ನ ಶಿಪ್ಟ್ ಬದಲಾಗಿತ್ತು..ದಿನ ಹಗಲಿಡಿ ಆಸ್ಪತ್ರೆಯಲ್ಲೇ ಇರುತ್ತಿದ್ದೆನಲ್ಲ... ಅಜ್ಜಿಯ ಜೊತೆ,ಅಜ್ಜಿಯ ಮಕ್ಕಳ ಜೊತೆ  ಬಹಳ ಮಾತಾಡುತ್ತಿದ್ದೆ. ಅಜ್ಜಿ ಬಹಳ ಗುಣಮುಖರಾಗಿದ್ದರು.ಈ ನಡುವೆ ಯಾಕೋ ಏನೋ ಪಾಪ ಅಜ್ಜಿಯ ಮಕ್ಕಳು ಎರಡು ದಿನದಿಂದ ಬಂದಿರಲಿಲ್ಲ.
                         ಒಂದು ದಿನ ಬೆಳಗ್ಗೆ ಡಾಕ್ಟರ್"ಅಜ್ಜಿ  ನೀವು ಈಗ ನಿಶ್ಚಿಂತೆಯಿಂದ ಮನೆಗೆ ಹೋಗಬಹುದು, ನಾನು ನಿಮ್ಮ ಮನೆಯವರಿಗೆ ತಿಳಿಸುವ ಏರ್ಪಾಡು ಮಾಡುತ್ತೇನೆ"ಅಂತ ಅಜ್ಜಿಗೆ ಹೇಳಿದಾಗ ಅಜ್ಜಿಯ ಮುಖದಲ್ಲಿ ಸಂಭ್ರಮದ ಬದಲು ವಿಚಿತ್ರ ಭಾವನೆ ಸುಳಿದು ಮರೆಯಾಯಿತು..ನಾನು "ಯಾಕಜ್ಜಿ ಏನಾಯ್ತು?"ಅಂತ ಕೇಳ್ದೆ..ಅಜ್ಜಿ ಕೇಳಿದ್ದು ಒಂದೇ ಒಂದು ಪ್ರಶ್ನೆ"ಮಗು,ಅದೇನೋ ಒಂದು ಸಂಘ ಇರುತ್ತಂತಲ್ಲ ವಯಸ್ಸಾದೋರು ಇರೋಕೆ...ಅದೆಲ್ಲಿದೆ ಗೊತ್ತಾ???" ನಾನು ಅದ್ಯಾಕೆ ಅಜ್ಜಿ ನಿಂಗೆ ಅಂದಿದ್ದಕ್ಕೆ "ನಾನು ಮತ್ತೆ ಆ ಮನೆಗೆ ಹೋಗಲ್ಲಾ,ನನ್ನ ಮಕ್ಕಳು ನನ್ನನ್ನೇ ಯಾರೋ  ಏನೋ ಅನ್ನೋಥರ ನೋಡ್ತಿದ್ದರೆ, ಬದುಕ್ಕಿರುವುದ್ದಕ್ಕಿಂತ ಸಾಯೋದು ಮೇಲುಅನ್ಸತ್ತೆ... ಅವರು ತೀರಿಕೊಂಡಾಗಿನಿಂದಲೂ  ನಾನು ಇವರ ಲೆಕ್ಕದಲ್ಲಿ ಬದುಕಿಯೇ ಇಲ್ಲ... ಅವ್ರಿಗೆ ಹೊರೆಯಾಗಿರೋದಕ್ಕಿಂತ ಇದು ಮೇಲು.. ಒಂದು ಉಪಕಾರ ಮಾಡು ಮಗ ನಂಗೆ.... ಒಂದೋ ನನ್ನ ಯಾವ್ದಾರು ಸಂಘಕ್ಕೆ ಸೇರಿಸಿಬಿಡು.. ಇಲ್ಲಾ ಯಾವ್ದಾರು ಇಂಜೆಕ್ಷನ್ನು ಕೊಟ್ಟು ಸಾಯಿಸಿಬಿಡು...ಇಷ್ಟು ಉಪಕಾರ ಮಾಡು ನಂಗೆ.." ಅಂತ ಅಳೋಕೆ ಶುರುಮಾಡಿದರು...ನನಗೆ ಹೇಗೆ ಸಮಾಧಾನ ಮಾಡಬೇಕು,ಏನು ಹೇಳಬೇಕು ಅಂತಾನೆ  ತಿಳಿಯದೇ ಎದ್ದು ಬಂದು ಬಿಟ್ಟೆ....
                           ಈಗ ಹೊಳೆದಿತ್ತು ನನಗೆ ಅಜ್ಜಿಯ ಮಕ್ಕಳು ಯಾಕೆ ಅಜ್ಜಿ ಗುಣಮುಖರಾಗುತ್ತಿದ್ದಾರೆ ಎಂಬ ಸೂಚನೆ ಸಿಕ್ಕಿದ್ದೇ ಮಾಯವಾಗಿದ್ದು ಅಂತ.............ಗೆಳೆಯರೇ ಇದು ನನ್ನ ಮೊದಲ ಪ್ರಯೋಗ....ಇದು ಎಲ್ಲಾ ಸಾಮಾನ್ಯ ಕಥೆಗಳಂತೆ ಇದ್ದರೂ ಪ್ರಸ್ತುತ ಎಲ್ಲೆಡೆಯೂ ನಡೆಯುತ್ತಿರುವ ಸಾಮಾನ್ಯ ಘಟನೆಗಳಲ್ಲೊಂದು ಕೂಡ....
ನಿಮ್ಮ ಅನಿಸಿಕೆ,ನಿಮ್ಮ ಸೂಚನೆಗಳಿಗಾಗಿ ಕಾಯುತ್ತಿರುವ.....

ಸರಿತಾ ಬಾಳೂರ