ಫೆಬ್ರವರಿ 19, 2011

ಇದ್ದರೆ ಇರಬೇಕು...


ಇದ್ದರೆ ಇರಬೇಕು....

ಮನೆಯೊಳಗಾಡುವ ಮಗು...
ಮನದೊಳು ಆಡುವಂತಿರಬೇಕು...
ಮನದೊಳಾಡುವ ಮಗು...
ಮುಂದೊಂದುದಿನ ಜಗದೊಳು...
ಎಲ್ಲರಲ್ಲೊಂದಾಗಿ ಆಡುವಂತಿರಬೇಕು...

ಇದ್ದರೆ ಇರಬೇಕು...

ಮುಗುಳುನಗುವ ತಾಯಿ...
ಎಂದೆಂದೂ ನಗುತಿರಬೇಕು...
ಮಗುವನ್ನು ತನ್ನಿಂದ ಅಗಲಿಸಿಯಾದರೂ...
ಮಗುವಿನ ಭವ್ಯ ಭವಿಷ್ಯಕ್ಕೆ...
ಅಡಿಪಾಯ ಇಡುವಂತಿರಬೇಕು...

ಇದ್ದರೆ ಇರಬೇಕು...

ಎಲ್ಲ ಹೊರೆ ತನ್ನದೆನ್ನುವ ತಂದೆ...
ಎಂದೆಂದೂ ಅಭಿಮಾನದಿಂದಿರಬೇಕು...
ಮಕ್ಕಳ ವಿಜಯದ ಆಧಾರವಾಗಿ...
ಸೋಲಿನಲ್ಲಿ ಬೆನ್ನುತಟ್ಟಿ...
ಜೊತೆನಡೆಯುವ ಗೆಳೆಯನಾಗಿರಬೇಕು...

ಇದ್ದರೆ ಇರಬೇಕು...

ಹೃದಯದಲ್ಲಿರುವ ಬಾಳಸಂಗಾತಿ...
ಮನಸ್ಸನ್ನು ಬೆಚ್ಚಗಿಡುವಂತಿರಬೇಕು...
ಎಂದೆಂದೂ ಜೊತೆ ಇರುವ...
ನಲಿವೆಂದೂ ಸುಳ್ಳಲ್ಲವೆಂದು...
ಸಾಧಿಸುವಂತಹ ನಲ್ಲನಿರಬೇಕು...

ಇದ್ದರೆ ಇರಬೇಕು...

ಜೊತೆಯಲ್ಲಿ ಹುಟ್ಟಿದ ಒಡಹುಟ್ಟಿದವರು... 
ಜೀವನಪೂರ್ತಿ ಒಗ್ಗಟ್ಟಾಗಿರಬೇಕು...
ಒಂದೇ ಸೂರಡಿ ಇರದಿದ್ದರೂ...
ಕೊನೆವರೆಗೂ ಒಂದೆನ್ನುವ...
ಭಾವನೆ ಮನದಲ್ಲಿರಬೇಕು...

ಇದ್ದರೆ ಇರಬೇಕು...

ಹೇಗೋ ಎಲ್ಲೋ ಸಿಕ್ಕ ಗೆಳೆಯರು...
ಹಿಂದಿನ ಜನ್ಮದ ನಂಟಿನಂತಿರಬೇಕು.... 
ಜಗವೆಂಬ ಮಾಯಾ ಜಂಜಾಟದಲಿ....
ನಿನ್ನೆ ಇಂದು ನಾಳೆ ರಾತ್ರೆ ಹಗಲೆನ್ನದೆ...
ಮನದ ಕದವ ತಟ್ಟುತಿರಬೇಕು...

ಇದ್ದರೆ ಇರಬೇಕು...

ಹುಟ್ಟಿನಿಂದ ಹುಟ್ಟಿಕೊಂಡ ಬಂಧುಗಳು....
ನಿಧಾನವಾಗಿಯಾದರೂ ಅರ್ಥವಾಗುವಂತಿರಬೇಕು...
ಅರ್ಥಕ್ಕೆ ಬೆಲೆಕೊಡದೆ...
ಜನರೊಡನೆ ತಾವು ಒಂದು...
ಎಂಬಂತಾಗದ ಸಂಬಂಧಿಕರಿರಬೇಕು...

ಇದ್ದರೆ ಇರಬೇಕು...
ಬದುಕಿರುವ ಕಾಲವೆಲ್ಲಾ...
ಮಲಗಿದಾಗಲೆಲ್ಲಾ...
ಈ ತರಹದ ಸುಂದರ ಕನಸುಗಳೆಲ್ಲಾ...
ಕಾಣುವಂತಿರಬೇಕು...

ಫೆಬ್ರವರಿ 1, 2011

ಆ ದಿನಗಳು.....

ಆ ದಿನಗಳು..... ದಿನ ಪ್ರತಿಕ್ಷಣ.... ಹೃದಯದೊಳಗೆ.......
ಯಾವ ದಿನಗಳು ಅಂತಿದೀರಾ?..... ಅದೇ ಆ ದಿನಗಳು....
ನಮಗೆ ಹೊರಲೋಕದ ಪರಿವೆಯೇ ಇಲ್ಲದ ದಿನಗಳು....
ಯಾವುದು ಹೇಳಿ?
ಅದೇ ನಮ್ಮ ಬಾಲ್ಯ...

ಅಬ್ಭಾ!!! ನನ್ನ ಬಾಲ್ಯವಂತೂ ನನಗೇನು ನನ್ನ ಸುತ್ತಮುತ್ತಲು ಇದ್ರಲ್ಲ ಆವಾಗ, ಅವರು ಕೂಡ ಮರಿಬೇಕೂ ಅಂತ ಶತಪ್ರಯತ್ನ ಮಾಡಿದ್ರು  ಮರೆಯೋದಿಲ್ಲ ಪಾಪ.... 
ಅಷ್ಟು ಕಿಲಾಡಿಯಾಗಿದ್ದೆ ನಾನು... ಮನೆಯಲ್ಲಿ ಕಿರಿಯ ಮಗಳು... ಮುದ್ದು ಜಾಸ್ತಿ... 
ಚಿಕ್ಕಂದಿನಲ್ಲಿ ಅಂಗನವಾಡಿಗೆ ಸೇರಿಸಿ ಅಮ್ಮ ವಾಪಾಸ್ ಬಂದ್ರೆ, ವಿರಾಮಕ್ಕೆ ಅಂತ ಬಿಟ್ಟಾಗ ಪಾಟೀಚೀಲ ತಗೊಂಡು ಸೀದಾ ಮನೆಗೆ ಓಡಿ ಬಂದವಳು ನಾನು... ಅಲ್ಲಿಂದ ಮತ್ತೆ ಬಾಲವಾಡಿಗೆ ಕಾಲಿಡಲಿಲ್ಲ ನಾನು....
ಅಮ್ಮ ಎಲ್ಲಿ ಹೋದರಲ್ಲಿ ನಾನು... ಜೊತೆಗೆ ನನ್ನ ಸೈನ್ಯ.... ಅಂದರೆ ನನ್ನ ಗೆಳೆಯರು.. (ಮೊದಲಿನಿಂದನು ಸ್ವಲ್ಪ ಜಾಸ್ತಿ ಅನ್ನಿಸುವಷ್ಟು ಗೆಳೆಯರು ನನಗೆ...) ಎಲ್ಲಾರಿಗೂ ಅಮ್ಮನೇ ವಿದ್ಯಾಭ್ಯಾಸದ ಮೊದಲ ಚರಣ ಹೇಳಿಕೊಟ್ಟಿದ್ದು...
ಯಾವಾಗ ಮೊದಲನೇ ತರಗತಿ ಸೇರಿದ್ನೋ ಆವಾಗಿನಿಂದ ಶುರು ನನ್ನ ಅಮೋಘ ಯಾತ್ರೆ...

ಮೊದಲಿಗೆ ಅಕ್ಕೊರನ್ನ ತುಂಬಾ ಬುದ್ದಿವಂತಳು ನಾನು ಅಂತ ಪ್ರೂವ್ ಮಾಡಿ ಬುಟ್ಟಿಗೆ ಹಾಕ್ಕೊಂಡು ಆಡಿದ ಆಟಗಳೆಷ್ಟೋ.... ?
ಲೆಕ್ಕಾನೆ ಇಲ್ಲ..... ಒಂದು ಶನಿವಾರನು ಡ್ರಿಲ್ ಮಾಡಿಯೇ ಇಲ್ಲ ನಾನು... 

ಅಂತದ್ರಲ್ಲಿ ಶಾಲೆಯ ಉತ್ತಮ ವಿಧ್ಯಾರ್ಥಿ ಪ್ರಶಸ್ತಿ ನನಗೆ ಕೊಡಿಸಬೇಕು ಅಂತ ಎಲ್ಲಾ ಅಕ್ಕೋರುಗಳು ಸೇರಿ ನನ್ನ ಸೇವಾದಲಕ್ಕೆ ಮತ್ತು ಖೋ ಖೋ ಗೆ ಸೇರಿಸಿ ನನ್ನ ಜೀವ ತಿಂದುಬಿಟ್ಟಿದ್ದರು...... ಕೊನೆಗೂ ನನಗೇ ಸಿಕ್ತು ಬಿಡಿ...
ಆ ದಿನಗಳಲ್ಲಿ ಪ್ರತಿನಿತ್ಯ ಒಂದು ಗ್ಲಾಸ್ ಹಾಲು ಕೊಡ್ತಿದ್ರಲ್ಲ... ನನಗೆ ಒಂದು ಬಾಟಲ್ ತುಂಬಾ ಅಕ್ಕೋರೆ ತಂದು ಕೊಡ್ತಿದ್ರು... ಯಾರಾದ್ರು ಶಾಲೆಗೆ ಅತಿಥಿಗಳು ಬಂದರೆ ಸಾಕು ಹಾಡು ಹೇಳು ಅಂತ ನಿಲ್ಲಿಸಿ ಬಿಡ್ತಿದ್ದರು... ನಾನು ಹಾಡ್ತಿದ್ದೆ.... ಒಂದೇ ಹಾಡು.... 
"ಮಳ್ಳಿ ಮಳ್ಳಿ ಮಿಂಚುಳ್ಳಿ.....ಜಾಣ ಜಾಣ ಕಾಜಾಣ..... ಪೂರ್ವ ಪೂರಾ ಕೆಂಪಾಯ್ತು...."
ನಿತ್ಯ ಗಾದೆಮಾತು,ಪಂಚಾಂಗ,ಸುದ್ದಿ ಓದೋದ್ರಲ್ಲಿ ಪ್ರತಿಸಲ ನಮ್ಮ ತರಗತಿಯ ಪಾಳಿಬಂದಾಗ ನಾನು ಯಾವುದಾದರು ಒಂದು ಓದಲೇಬೇಕಿತ್ತು.... ಅಷ್ಟು ದೊಡ್ಡ ಕೂಗುತ್ತಿದ್ದೆ ನಾನು ಅಂತ ಅದರರ್ಥ...
ಇನ್ನು ನನ್ನ ಫ್ರೆಂಡ್ಸ್ ಗ್ಯಾಂಗ್ ಬಗ್ಗೆ ಹೇಳ್ಬೇಕು ಅಂದ್ರೆ ನಾವು ನಾಲ್ಕು ಜನ ಹುಡ್ಗೀರು ನಾಲ್ಕು ಜನ  ಹುಡುಗ್ರು. ಮಾಡದೇ ಇರೋ  ಕಿತಾಪತಿ ಇಲ್ಲ... ಆದ್ರೆ ನಾವೇ ಶಾಲೆಗೆ ಫಸ್ಟ್... ಎಲ್ಲಾ ವರ್ಷನೂ... ಪ್ರತೀ ಶನಿವಾರ ಅರ್ಧದಿನ ಆದ್ರೂ ನಾವು ಟಿಫಿನ್ ಒಯ್ತಿದ್ವಿ... ಶಾಲೆ ಮುಗಿದ ಮೇಲೆ ಸೀದಾ ಕೆ.ಇ.ಬಿ.ಹಿಂದೆ ಇರೋ ಪುಟ್ಟನಮನೆ ಬ್ಯಾಣದಲ್ಲಿ ಆಟ ಆಡಿ ಸಂಜೆ ಆರಕ್ಕೆ ಮನೆಗೆ ಹೋಗ್ತಿದ್ವಿ ಎಲ್ಲಾರು... 

ಇಂಥ ಗುಂಪಿನ ಹೆಸರು ಇನ್ನೂ ಶಾಲೆಯ ನೋಟಿಸ್ ಬೋರ್ಡ್ನಲ್ಲಿ ಬರೆದಿದ್ದು ಇದೆ ಉತ್ತಮ ವಿಧ್ಯಾರ್ಥಿಗಳು ಅಂತ...!! (ಹ.. ಹ್ಹ...ಹ್ಹ)
ಇನ್ನು ಮನೆಲೋ ಎದುರಿಗೆ ಬ್ಯಾಣ,ಹಿಂದೆ ಗದ್ದೆ, ಪಕ್ಕದಲ್ಲಿ ದೊಡ್ಡ ಆಲದಮರದ ಚೌಡಿಕಟ್ಟೆ... ಇನ್ನು ನನ್ನ ಹಿಡಿಯುವವರು ಯಾರು?
ದಿನ ಅಲ್ಲಿ ಆಟ... ನನ್ನ ಹಿಡಿದು ಮನೆಗೆ ತರೋದೆ ಅಮ್ಮಂಗೆ ಒಂದು ದೊಡ್ಡ ಕೆಲಸವಾಗಿತ್ತು ದಿನಾ... ಅಮ್ಮ ಅಪ್ಪ ಈಗಲೂ ಹೇಳ್ತಾರೆ .... "ನಮ್ಮ ಮನೆಯ ಉಳಿದ ಇಬ್ಬರು ಕಾಟ ಕೊಡುವುದನ್ನು ಒಬ್ಬಳೇ ಕೊಟ್ಟು ಮುಗ್ಸಿಬಿಟ್ಟಿದ್ದಾಳೆ"ಅಂತ... ಪಾಪ...
ಪಾಪ ಅನ್ನೋಕು ಒಂದು ಕಾರಣ ಇದೆ...ನಮ್ಮ ಅಪ್ಪ ಎಲೆಕ್ಟ್ರಿಷಿಯನ್,,,, ಗೊತ್ತಲ್ಲ ಎಲ್ಲಾ ಎಲೆಕ್ಟ್ರಿಷಿಯನ್ ಮನೇಲೂ ಸುಮಾರಿಗೆ ಎಲ್ಲಾ ಎಲೆಕ್ಟ್ರಿಕಲ್ ವಸ್ತುಗಳು ಅಲ್ಲಿ ಇಲ್ಲಿ ಗಂಟೇಪ್ ಹಚ್ಚಿದ್ದೆ ಇರತ್ತೆ... ಹಾಗೆ ಜೋಡಿಸಿದ ಒಂದು ರೇಡಿಯೋ ಇತ್ತು... ಒಂದಿನ ನಾನು ಅಪ್ಪನತ್ರ ಕೇಳ್ದೆ "ಗಂಟೇಪ್ ಬಿಟ್ಟಿರೋ ಜಾಗದಲ್ಲಿ ಮುಟ್ಟರೆ ಏನಾಗತ್ತೆ?" ಅಂತ... ಅಪ್ಪ ಶಾಕ್ ಹೊಡಿಯುತ್ತೆ ಮುಟ್ಟಬಾರದು ಅಂತ ಹೇಳಿ ಹೋದ್ರೆ, ನಾನು ಅವರು ಹೋದ ಎರಡೇ ನಿಮಿಷಕ್ಕೆ ಒಂದು ದೊಡ್ಡ ನೀರು ತುಂಬುವ ಟಬ್ಬು ತಂದು ಅದ್ನ ಉಲ್ಟಾ ಮಾಡಿ ಹತ್ತಿ ಕೈಯಲ್ಲಿ ಹಿಡ್ದಿದ್ದೆ....
ಫುಲ್ ಷಾಕ್..... 
ಕೂಗೋಕೆ ಧ್ವನಿನೇ ಹೊರಡ್ತಾ ಇಲ್ಲಾ.... ನನ್ನ ಪುಣ್ಯ ಅಮ್ಮ ನನ್ನ ಗಲಾಟೆ ಇಲ್ವಲ್ಲ ಅಂತ ನೋಡೋಕೆ ಬರದೇ ಇದ್ರೆ ಹರೋಹರ ಅಗ್ಬಿಡ್ತಿದ್ದೆ ಆವಾಗ್ಲೇ...... ಅದರ ಗುರುತು ಈಗಲೂ ನನ್ನ ಕೈಯಲ್ಲಿ ಮತ್ತು ನಮ್ಮ ಮನೆಯ ಆ ಟಬ್ಬಿನಲ್ಲಿ ಉಳಿದಿದೆ.....
ಅಮ್ಮ ಅಪ್ಪನಿಗೆ ಈಗಲೂ ಒಂದು ಪ್ರಶ್ನೆಗೆ ಉತ್ತರಾನೇ ಸಿಕ್ಕಿಲ್ಲ... ಇಷ್ಟೆಲ್ಲಾ ಕಿತಾಪತಿ ಮಾಡುವ ನನ್ನ ಮೇಲೆ ಶಾಲೆಯಿಂದ ಯಾಕೆ ಒಂದೇ ಒಂದು ದೂರು ಬಂದಿಲ್ಲ ಅಂತ.... ಎಷ್ಟು ಕಾದಿದ್ದಾರೆ ಗೊತ್ತ ಬರಲಿ ಅಂತ..... ಅಮ್ಮ ಅಂತು ಕೇಳು ಕೇಳಿದ್ರು ನಮ್ಮ ಅಕ್ಕೋರತ್ರ....
ಅದ್ಹೇಗೆ ಸಾಧ್ಯ??? 
ನಾನು ತುಂಬಾ ಸಾಚಾ ಹೊರಗಡೆ..... ಹ ಹ್ಹ ಹ್ಹ ....
ಇದೆಲ್ಲ ಕೇವಲ ಕೆಲ ಉದಾಹರಣೆಗಳು ಅಷ್ಟೇ..!!!
ಇನ್ನೂ ಏನೇನೋ ದೊಡ್ಡದೊಡ್ಡ ಕಿತಾಪತಿಗಳ ಪಟ್ಟಿಯೇ ಇದೆ....
ಬಿಡಿ ಇಷ್ಟು ಸಾಕು...
ಈಗ ನಿಜ ಹೇಳಿ.... ನಿಮ್ಮ ಬಾಲ್ಯದ ನೆನಪಾಗಲಿಲ್ಲವೇ???
बार बार याद आती है 
मुज़को मधुर याद बचपन मेरी.....