ಜನವರಿ 28, 2011

ತಾಯಿ

                 ನಗರದ ಜನಪ್ರಿಯ ಆಸ್ಪತ್ರೆಯ ದಾದಿ ನಾನು. ಒಂದು ಮಳೆಗಾಲದ ಮುಂಜಾವು ಜಿಟಿ ಜಿಟಿ ಮಳೆ ಹೊಡೆಯುತ್ತಲೇ ಇತ್ತು. ನನ್ನದು ರಾತ್ರಿಪಾಳಿ ಆಗಿತ್ತು. ಬೆಳಗ್ಗೆ ಎಂಟಕ್ಕೆಲ್ಲ ಕೆಲಸದ ಅವಧಿ ಮುಕ್ತಾಯ. ಸುಮಾರು ಆರು ಮೂವತ್ತರ ಸಮಯದಲ್ಲಿ ಒಂದು ಪೇಶಂಟನ್ನು (ಅಜ್ಜಿ) ಕರೆದುಕೊಂಡು ಮಧ್ಯವಯಸ್ಕ ದಂಪತಿಗಳು ಮತ್ತು ಒಂದು ಪ್ರಾಥಮಿಕ ಶಾಲೆಗೆ ಹೋಗುವ ಹುಡುಗಿ ಬಂದರು.ಅಜ್ಜಿ ಅಸ್ತಮಾದಿಂದ ನರಳುತ್ತಿದ್ದರು, ಜೊತೆಗೆ ಬಿ.ಪಿ. ಮತ್ತು ಶುಗರ್.ಅಜ್ಜಿಯ ಸ್ಥಿತಿ ಗಂಭೀರವಾಗಿತ್ತು.ಹತ್ತಿರದ ಯಾವುದೋ ಹಳ್ಳಿಯಿಂದ ಬಂದಿದ್ದರು.ಡಾಕ್ಟರು ಬಂದು ಪರೀಕ್ಷೆಮಾಡಿ, ನಮಗೆ ಕೆಲವು ಸೂಚನೆಗಳನ್ನು ಕೊಟ್ಟು ಹೋದರು.ನಾವು ಅಜ್ಜಿಯನ್ನು ಅಡ್ಮಿಟ್ ಮಾಡಿಕೊಂಡು ಡ್ರಿಪ್ ಇಂಜೆಕ್ಷನ್ನು   ಎಲ್ಲಾ ಕೊಟ್ಟು ಮುಗಿಸುವವರೆಗೆ ಎಂಟು ಮೂವತ್ತು.ನನ್ನ ಕೆಲಸದ ಅವಧಿ ಅಲ್ಲಿಗೆ ಮುಗಿದಿತ್ತು.
                 ಮತ್ತೆ ರಾತ್ರಿ ಆಸ್ಪತ್ರೆಗೆ ಬಂದು ಅರ್ಧತಾಸು ಕಳೆದಿರಬಹುದಷ್ಟೇ...ಅಜ್ಜಿ ಉಸಿರಾಡೋಕೆ ಕಷ್ಟಪಡ್ತಿದ್ದಾರೆ ಅಂತ ಚಿಕ್ಕ ಹುಡುಗಿ ಬಂದು ಕರೆದುಕೊಂಡು ಹೋದಳು.. ಅಲ್ಲಿ ಹೋಗಿ ನೋಡಿದರೆ ಅಜ್ಜಿ ಅಸ್ತಮ ಹೆಚ್ಚಾಗಿ ಉಸಿರಾಡೋಕೆ ಕಷ್ಟಪಡುತ್ತಿದ್ದರು.ಅವ್ರಿಗೆ ನೀಡುವ ಚಿಕಿತ್ಸೆ ನೀಡಿ ಅವ್ರು ಸ್ವಲ್ಪ ಸುಧಾರಿಸಿಕೊಂಡ ನಂತರನೇ ನನಗೆ ಲಕ್ಷ್ಯ ಬಂದಿದ್ದು ಅಜ್ಜಿಯ ಜೊತೆ ಈ ಚಿಕ್ಕ ಹುಡುಗಿಯ ಬಿಟ್ಟರೆ ಮತ್ಯಾರು ಇಲ್ಲ ಎಂದು.ಆ ಬಗ್ಗೆ ಸಹ ಸಿಬ್ಬಂದಿಯವರಲ್ಲಿ ಕೇಳಿದಾಗ ತಿಳಿದು ಬಂದದ್ದಿಷ್ಟು.ಅವರಿಬ್ಬರು ಅಜ್ಜಿಯ ಕಿರಿಮಗ ಸೊಸೆ,ಇಬ್ಬರೂ ಬೆಳಗ್ಗೆನೇ ಮುಂಗಡ ಹಣ ಪಾವತಿ ಮಾಡಿ ಅವರ ಮನೆಯಲ್ಲಿ ಓದಲೆಂದು ಇರುವ ಚಿಕ್ಕ ಮಗುವನ್ನು ಅಜ್ಜಿಯ ಜೊತೆಯಲ್ಲಿ ಬಿಟ್ಟು ಮನೆಗೆ ಹೋಗಿದ್ದಾರೆ ಅಂತ. ನಂಗೆ ಆಶ್ಚರ್ಯ ಜೊತೆಗೆ ಕೋಪನು ಬಂತು ಅವರ ಮೇಲೆ, ಅಂತ ಘನಕಾರ್ಯ ಏನಿರಬಹುದು ಅವರಿಗೆ ಅಂತ....ಬೆಳಗ್ಗೆ ಅಜ್ಜಿ ಸ್ವಲ್ಪ ಸುಧಾರಿಸಿದ್ದರು..ಎಲ್ಲರ ಬಳಿಯೂ ಮಾತನಾಡಲು ಆರಂಭಿಸಿದ್ದರು.
                            ಅಜ್ಜಿಯ ಮಗ ಸೊಸೆ ಹೀಗೆ ಒಬ್ಬರಲ್ಲ ಒಬ್ಬರು ಅಜ್ಜಿಯನ್ನು ನೋಡಲು ದಿನಾ ಬರುತ್ತಿದ್ದರು.ಅವರಿಗೆ ಮನೆಯಿಂದನೆ ಊಟ,ತಿಂಡಿ ಎಲ್ಲಾ ತರುತ್ತಿದ್ದರು. ಹೀಗೆ ಒಂದು ವಾರ ಕಳೆಯಿತು...ಈ ನಡುವೆ ನನ್ನ ಶಿಪ್ಟ್ ಬದಲಾಗಿತ್ತು..ದಿನ ಹಗಲಿಡಿ ಆಸ್ಪತ್ರೆಯಲ್ಲೇ ಇರುತ್ತಿದ್ದೆನಲ್ಲ... ಅಜ್ಜಿಯ ಜೊತೆ,ಅಜ್ಜಿಯ ಮಕ್ಕಳ ಜೊತೆ  ಬಹಳ ಮಾತಾಡುತ್ತಿದ್ದೆ. ಅಜ್ಜಿ ಬಹಳ ಗುಣಮುಖರಾಗಿದ್ದರು.ಈ ನಡುವೆ ಯಾಕೋ ಏನೋ ಪಾಪ ಅಜ್ಜಿಯ ಮಕ್ಕಳು ಎರಡು ದಿನದಿಂದ ಬಂದಿರಲಿಲ್ಲ.
                         ಒಂದು ದಿನ ಬೆಳಗ್ಗೆ ಡಾಕ್ಟರ್"ಅಜ್ಜಿ  ನೀವು ಈಗ ನಿಶ್ಚಿಂತೆಯಿಂದ ಮನೆಗೆ ಹೋಗಬಹುದು, ನಾನು ನಿಮ್ಮ ಮನೆಯವರಿಗೆ ತಿಳಿಸುವ ಏರ್ಪಾಡು ಮಾಡುತ್ತೇನೆ"ಅಂತ ಅಜ್ಜಿಗೆ ಹೇಳಿದಾಗ ಅಜ್ಜಿಯ ಮುಖದಲ್ಲಿ ಸಂಭ್ರಮದ ಬದಲು ವಿಚಿತ್ರ ಭಾವನೆ ಸುಳಿದು ಮರೆಯಾಯಿತು..ನಾನು "ಯಾಕಜ್ಜಿ ಏನಾಯ್ತು?"ಅಂತ ಕೇಳ್ದೆ..ಅಜ್ಜಿ ಕೇಳಿದ್ದು ಒಂದೇ ಒಂದು ಪ್ರಶ್ನೆ"ಮಗು,ಅದೇನೋ ಒಂದು ಸಂಘ ಇರುತ್ತಂತಲ್ಲ ವಯಸ್ಸಾದೋರು ಇರೋಕೆ...ಅದೆಲ್ಲಿದೆ ಗೊತ್ತಾ???" ನಾನು ಅದ್ಯಾಕೆ ಅಜ್ಜಿ ನಿಂಗೆ ಅಂದಿದ್ದಕ್ಕೆ "ನಾನು ಮತ್ತೆ ಆ ಮನೆಗೆ ಹೋಗಲ್ಲಾ,ನನ್ನ ಮಕ್ಕಳು ನನ್ನನ್ನೇ ಯಾರೋ  ಏನೋ ಅನ್ನೋಥರ ನೋಡ್ತಿದ್ದರೆ, ಬದುಕ್ಕಿರುವುದ್ದಕ್ಕಿಂತ ಸಾಯೋದು ಮೇಲುಅನ್ಸತ್ತೆ... ಅವರು ತೀರಿಕೊಂಡಾಗಿನಿಂದಲೂ  ನಾನು ಇವರ ಲೆಕ್ಕದಲ್ಲಿ ಬದುಕಿಯೇ ಇಲ್ಲ... ಅವ್ರಿಗೆ ಹೊರೆಯಾಗಿರೋದಕ್ಕಿಂತ ಇದು ಮೇಲು.. ಒಂದು ಉಪಕಾರ ಮಾಡು ಮಗ ನಂಗೆ.... ಒಂದೋ ನನ್ನ ಯಾವ್ದಾರು ಸಂಘಕ್ಕೆ ಸೇರಿಸಿಬಿಡು.. ಇಲ್ಲಾ ಯಾವ್ದಾರು ಇಂಜೆಕ್ಷನ್ನು ಕೊಟ್ಟು ಸಾಯಿಸಿಬಿಡು...ಇಷ್ಟು ಉಪಕಾರ ಮಾಡು ನಂಗೆ.." ಅಂತ ಅಳೋಕೆ ಶುರುಮಾಡಿದರು...ನನಗೆ ಹೇಗೆ ಸಮಾಧಾನ ಮಾಡಬೇಕು,ಏನು ಹೇಳಬೇಕು ಅಂತಾನೆ  ತಿಳಿಯದೇ ಎದ್ದು ಬಂದು ಬಿಟ್ಟೆ....
                           ಈಗ ಹೊಳೆದಿತ್ತು ನನಗೆ ಅಜ್ಜಿಯ ಮಕ್ಕಳು ಯಾಕೆ ಅಜ್ಜಿ ಗುಣಮುಖರಾಗುತ್ತಿದ್ದಾರೆ ಎಂಬ ಸೂಚನೆ ಸಿಕ್ಕಿದ್ದೇ ಮಾಯವಾಗಿದ್ದು ಅಂತ.............







ಗೆಳೆಯರೇ ಇದು ನನ್ನ ಮೊದಲ ಪ್ರಯೋಗ....ಇದು ಎಲ್ಲಾ ಸಾಮಾನ್ಯ ಕಥೆಗಳಂತೆ ಇದ್ದರೂ ಪ್ರಸ್ತುತ ಎಲ್ಲೆಡೆಯೂ ನಡೆಯುತ್ತಿರುವ ಸಾಮಾನ್ಯ ಘಟನೆಗಳಲ್ಲೊಂದು ಕೂಡ....
ನಿಮ್ಮ ಅನಿಸಿಕೆ,ನಿಮ್ಮ ಸೂಚನೆಗಳಿಗಾಗಿ ಕಾಯುತ್ತಿರುವ.....

ಸರಿತಾ ಬಾಳೂರ

3 ಕಾಮೆಂಟ್‌ಗಳು:

  1. ಸರಿತಾ...

    ಕಥೆ ಅಂತ ಅನಿಸಲಿಲ್ಲ...
    ಆಧುನಿಕರಾಗಿರುವ ನಮಗೆ ಮಾನವ ಸಂಬಂಧಗಳ ಬಗೆಗೆ ವಿಶ್ವಾಸ ಕಳೆದುಕೊಳ್ಳುತ್ತಿದ್ದೇವೆ...

    ಮೊದಲ ಪ್ರಯತ್ನ ತುಂಬಾ ಚೆನ್ನಾಗಿದೆ.. ಅಭಿನಂದನೆಗಳು..

    ಇನ್ನಷ್ಟು ಬರೆಯಿರಿ...

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು ಪ್ರಕಾಶಣ್ಣ...

    ಇದು ಕಥೆಯಲ್ಲ.... ದಿನ ನಿತ್ಯ ನಡೆಯುತ್ತಿರುವ ಘಟನೆಗಳ ಸಣ್ಣ ನಿದರ್ಶನ ಅಷ್ಟೇ....

    ಅಲ್ಲದೆ ಇದು ನಿಜವಾಗಿಯೂ ನಡೆದಂತಹ ಘಟನೆ...

    ನಿಮ್ಮ ಎಲ್ಲಾ ರೀತಿಯ ಪ್ರೋತ್ಸಾಹಕ್ಕೂ ನನ್ನ ವಂದನೆಗಳು...

    ಪ್ರತ್ಯುತ್ತರಅಳಿಸಿ